ದುರ್ಗಾದಾಸ್ 1 

1639 - 1719. ಮಾರವಾಡದ ರಾಥೋಡರ ನಾಯಕ. ದಕ್ಷ ಸೇನಾನಿ, ರಾಜನೀತಿಜ್ಞ; 1639ರ ಆಗಸ್ಟ್ 13 ರಂದು ಜನಿಸಿದ. ಮಾರವಾಡದ ರಾಜ ಜಸವಂತ ಸಿಂಹನ ಮಾಂತ್ರಿಯಾಗಿದ್ದ ಅಸಕರನ ಮಗ. ಜಸವಂತ ಸಿಂಹ ಮೊಗಲ್ ಸಾಮ್ರಾಟನ ಸಹಾಯಾರ್ಥವಾಗಿ ಹೋಗಿದ್ದಾಗ ಆಫ್ಘಾನಿಸ್ತಾನದ ಜಮ್ರೂಡ್‍ನಲ್ಲಿ 1678ರ ಡಿಸೆಂಬರ್ 10 ರಂದು ತೀರಿಕೊಂಡ. ಅವನಿಗೆ ಮಕ್ಕಳಿರಲಿಲ್ಲ. ಗರ್ಭವತಿಯಾಗಿದ್ದ ರಾಣಿಗೆ ರಾಜನ ಮರಣಾನಂತರ ಅವಳಿ ಮಕ್ಕಳು ಹುಟ್ಟಿದವು. ಅವುಗಳಲ್ಲಿ ಒಂದು ಮಗು ತೀರಿಕೊಂಡಿತು. ಇನ್ನೊಂದು ಮಗುವೇ ಅಜಿತ್ ಸಿಂಗ್. ಮಾರವಾಡದ ಸಿಂಹಾಸನದ ಉತ್ತರಾಧಿಕಾರಿಯೆಂದು ಅವನಿಗೆ ಮನ್ನಣೆ ನೀಡಬೇಕೆಂದು ದುರ್ಗಾದಾಸನೂ ಇತರರೂ ಮೊಗಲ್ ಚಕ್ರವರ್ತಿ ಔರಂಗ್eóÉೀಬನನ್ನು ಪ್ರಾರ್ಥಿಸಿದರು. ಆದರೆ ಔರಂಗ್eóÉೀಬ್ ಆ ರಾಜ್ಯವನ್ನು ಕಬಳಿಸಲು ಹೊಂಚು ಹಾಕುತ್ತಿದ್ದ. ದೆಹಲಿಗೆ ಬಂದಿದ್ದ ರಾಣಿಯನ್ನೂ ಮಗುವನ್ನೂ ಸೆರೆಹಿಡಿಯಲು ಸೈನ್ಯವನ್ನು ಕಳಿಸಿದ. ದುರ್ಗಾದಾಸ್ ರಜಪೂತ ಸೈನ್ಯದ ನೆರವು ಪಡೆದು ಉಪಾಯದಿಂದ ರಾಜಕುಮಾರನನ್ನೂ ರಾಣಿಯನ್ನೂ ಬಿಡಿಸಿಕೊಂಡು ಪಲಾಯನ ಮಾಡಿದ. ಮಾರವಾಡಕ್ಕೆ ಬಂದು ಮೊಗಲ್ ಸೈನ್ಯದ ವಿರುದ್ಧ ಯುದ್ಧ ಮಾಡಲು ವ್ಯವಸ್ಥೆ ಮಾಡಿದ. ಅಲ್ಲದೆ ರಾಣಿಯನ್ನೂ ರಾಜಕುಮಾರನ್ನೂ ಜೋಧ್‍ಪುರಕ್ಕೆ ಕರೆತಂದ. ಮೇವಾಡದ ರಾಣನೊಂದಿಗೆ ಒಪ್ಪಂದ ಮಾಡಿಕೊಂಡು ಔರಂಗ್eóÉೀಬನ ವಿರುದ್ಧ ಯುದ್ಧ ಮಾಡಲು ಧಾವಿಸಿದ. 1680ರಲ್ಲಿ ನಡೆದ ಭೀಕರ ಕದನದಲ್ಲಿ ರಾಥೋಡನ ಸೇನಾನಾಯಕನಾಗಿ ಬಹು ಚತುರತೆಯಿಂದ ಕಾದಾಡಿದ. ಈ ಯುದ್ದದಲ್ಲಿ ಔರಂಗ್eóÉೀಬನ ವಿದ್ರೋಹಿ ಪುತ್ರನಾದ ಅಕ್ಬರನನ್ನು ರಜಪೂತ ಸೈನ್ಯ ಸೆರೆಹಿಡಿಯಿತು. ಔರಂಗ್eóÉೀಬ್ ಮಗನನ್ನು ಬಿಡಿಸಿಕೊಳ್ಳುವ ತಂತ್ರ ಹೂಡುವುದರಲ್ಲಿದ್ದ. ಇದು ಗೊತ್ತಾದ ಕೂಡಲೇ ದುರ್ಗಾದಾಸ್ ಅಕ್ಬರನ್ನು ಕರೆದುಕೊಂಡು ಖಾಂದೇಶ ಬಗ್ಲಾನಾ ಮಾರ್ಗವಾಗಿ ಮರಾಠರ ಸಾಮ್ರಾಜ್ಯಕ್ಕೆ ಓಡಿಬಂದು ಸಾಂಬಾಜಿಯ ಆಸ್ಥಾನದಲ್ಲಿ ಅಕ್ಬರನ್ನು ಭದ್ರವಾಗಿ ಇರಿಸಿದ. ಮೊಗಲ್ ಸೈನ್ಯದ ವಿರುದ್ಧಕಾದಾಡಲು ಸಾಂಬಾಜಿ ಆಸಕ್ತಿ ತೋರಲಿಲ್ಲ. ದುರ್ಗಾದಾಸ್ ಕೂಡಲೇ ಮಾರವಾಡಕ್ಕೆ ಧಾವಿಸಿದ (1687). ಮೇವಾಡದ ಸೈನ್ಯ ಮೊಗಲ್‍ರೊಡನೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ದುರ್ಗಾದಾಸ್ ಪುನ: ಯುದ್ಧ ಸಾರಿದ. ರಜಪೂತ ಸೇನೆಯ ನಾಯಕತ್ವ ವಹಿಸಿ ಕಾದಾಡಿದ. ಅಜಿತ್ ಸಿಂಹನನ್ನು ಮಾರವಾಡದ ಸಿಂಹಾಸನದ ರಾಣನೆಂದು ಮೊಗಲರು ಮಾನ್ಯ ಮಾಡಲೆಬೇಕಾಯಿತು(1709). ಆದರೆ ಸ್ವಲ್ಪ ಕಾಲದಲ್ಲೇ ಅಜಿತ್‍ಸಿಂಹ ತನ್ನ ರಕ್ಷಕನಾದ ದುರ್ಗದಾಸನನ್ನೇ ದೇಶಭ್ರಷ್ಟನನ್ನಾಗಿ ಮಾಡಿದ. ದುರ್ಗದಾಸ್ ಮಾರವಾಡವನ್ನು ಬಿಟ್ಟು ಉದಯಪುರದ ಮಹಾರಾಣನ ಆಸ್ಥಾನದಲ್ಲಿ ಸೇವೆ ಸಲ್ಲಿಸಲಾರಂಭಿಸಿದ. 1719ರ ನವಂಬರ್ 22ರಂದು ಅವನು ರಾಮಾಪುರದಲ್ಲಿ ತೀರಿಕೊಂಡ.            (ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ